ಬ್ರಿಟಿಷ್ ಪಾರ್ಲಿಮೆಂಟ್ - 	ಗ್ರೇಟ್ ಬ್ರಿಟನ್ನಿನ ವಿಧಾನ ಮಂಡಲ, ಸಂಸತ್ತು. ಪ್ರಾಚೀನ ಕಾಲದಲ್ಲಿ ಗ್ರೀಸ್ ದೇಶ ಪ್ರಜಾಪ್ರಭುತ್ವದ ತವರು ಎಂಬ ಖ್ಯಾತಿ ಗಳಿಸಿದ್ದಂತೆ ಆಧುನಿಕ ಕಾಲದಲ್ಲಿ ಬ್ರಿಟನ್ನು ಪ್ರಜಾಪ್ರಭುತ್ವ ಸಂಪ್ರದಾಯಗಳ ಆಗರವೆಂದು ಪ್ರಸಿದ್ಧವಾಗಿದೆ. ಬ್ರಿಟನ್ನಿನ ಇತಿಹಾಸವೆಂದರೆ ಅಲ್ಲಿಯ ಅರಸರು ಮತ್ತು ಪ್ರಜೆಗಳ ನಡುವೆ ದೀರ್ಘಕಾಲ ನಡೆದ ಹೋರಾಟದ ಕಥೆ. ಈ ದೇಶದ ಜನರು ಸ್ವಾತಂತ್ರ್ಯ ಪ್ರಿಯರಾಗಿದ್ದು, ದಾರಿ ತಪ್ಪಿದ ಅರಸರ ವಿರುದ್ದ ಮೊದಲಿನಿಂದಲೂ ಪ್ರತಿಭಟಿಸುತ್ತ ಬಂದರು. ಹೀಗಾಗಿ ಮೇಲಿಂದ ಮೇಲೆ ರಾಜರು ಮತ್ತು ಪ್ರಜೆಗಳಲ್ಲಿ ಘರ್ಷಣೆಗಳಾಗಿ ಕ್ರಮೇಣ ರಾಜತ್ವದ ಅಧಿಕಾರ ಮೊಟಕಾಗುತ್ತ ಬಂದು ಚುನಾಯಿತ ಪ್ರತಿನಿಧಿಗಳ ಅಧಿಕಾರ ಬೆಳೆಯುತ್ತ ಬಂತು. ಇಂಗ್ಲೆಂಡಿನ ಪಾರ್ಲಿಮೆಂಟು ಬ್ರಿಟಿಷ್ ಪ್ರಜೆಗಳು ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಡಿ ಗಳಿಸಿದ ಪ್ರಜಾಹಕ್ಕುಗಳ ದಿಗ್ವಿಜಯದ ಪ್ರತೀಕವಾಗಿದೆ.

	ಸುಮಾರು ಏಳು ನೂರು ವರ್ಷಗಳ ಪ್ರಜಾಹೋರಾಟದ ಇತಿಹಾಸವಿರುವ ಇಂಗ್ಲೆಂಡಿನಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಂಪ್ರದಾಯಗಳು ಯಶಸ್ವಿಯಾಗಿ ಬೆಳೆದು ಬಂದಿವೆ. ಎಂಥ ಕಠಿಣ ಪ್ರಸಂಗದಲ್ಲೂ ಈ ದೇಶದಲ್ಲಿ ಪ್ರಜಾಪ್ರಭುತ್ವದ ದೀಪ ಆರದೆ ಬೆಳಗುತ್ತ ಬಂದಿದೆ. ಇಷ್ಟೇ ಅಲ್ಲ, ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಂಸ್ಥೆಗಳು ಇಲ್ಲಿಂದ ಪ್ರಪಂಚದ ಇತರ ದೇಶಗಳಿಗೆ ಹರಡಿವೆ. ಬ್ರಿಟನ್ನಿನಲ್ಲಿರುವ ಪ್ರಜಾಪ್ರಭುತ್ವ ಪ್ರಪಂಚದ ಅನೇಕ ಜನರಿಗೆ ಸ್ಛೂರ್ತಿ ನೀಡಿದೆ. ಪ್ರಜಾಪ್ರಭುತ್ವವಿರುವ ಅನೇಕ ರಾಷ್ಟ್ರಗಳು ಸಂಶಯ ತಲೆದೋರಿದಾಗ, ಬ್ರಿಟನ್ನಿನ ಸಂಪ್ರದಾಯ ಮತ್ತು ಆಚರಣೆಗಳ ಕಡೆ ನೋಡುತ್ತವೆ. ಬ್ರಿಟನ್ನಿನಲ್ಲಿರುವ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ-ಸಂಸದೀಯ ಪ್ರಜಾಪ್ರಭುತ್ವ ಪದ್ಧತಿ-ಆ ದೇಶದ ಒಂದು ಹೆಮ್ಮೆಯಾಗಿದೆ.

	ವಾಸ್ತವವಾಗಿ ಬ್ರಿಟನ್ನಿನ ಪಾರ್ಲಿಮೆಂಟು ಸಾಮಾನ್ಯರ ಸಭೆ (ಹೌಸ್ ಅಫ್ ಕಾಮನ್ಸ್). ಗಣ್ಯರ ಸಭೆ (ಹೌಸ್ ಅಫ್ ಲಾಡ್ರ್ಸ್) ಮತ್ತು ರಾಜತ್ವವನ್ನು ಒಳಗೊಂಡಿದೆ. ಈ ಮೂರೂ ಸಂಸತ್ತಿನ ಅವಿಭಾಜ್ಯ ಅಂಗಗಳು, ಆದರೆ ರೂಢಿಯಲ್ಲಿ ಪಾರ್ಲಿಮೆಂಟ್ ಎಂದರೆ ಸಾಮಾನ್ಯರ ಸಭೆ ಎಂದೇ ಪರಿಗಣಿತವಾಗಿದೆ. ಬ್ರಿಟನ್ನಿನ ಪಾರ್ಲಿಮೆಂಟಿಗೆ ಅನೇಕ ಶತಮಾನಗಳ ಇತಿಹಾಸವಿದೆ.

	ಹುಟ್ಟು ಹಾಗೂ ಬೆಳವಣಿಗೆ : ಮಾನವನ ಇತಿಹಾಸದ ಆದಿಯಿಂದಲೂ ಪ್ರಭುತ್ವ ನಡೆಸುವವರಿಗೆ ಸಲಹೆಗಾರರ ಸಭೆಗಳು ಇವೆ. ಕಾಡು ಜನಾಂಗದ ಮುಖಂಡನಿಗೆ ಕೂಡ ಸಲಹೆಗಾರರು ಇದ್ದ ಉದಾಹರಣಿಗಳು ಇವೆ. ಅದರಂತೆ ಬ್ರಿಟನ್ನನ್ನು ಗೆದ್ದ ಆಂಗ್ಲೊ-ಸ್ಯಾಕ್ಸನ್ ಜನಾಂಗಗಳಲ್ಲೂ ಸಲಹೆಗಾರರ ಸಭೆಗಳಿದ್ದುವು. ಇಂಥ ಪ್ರಾಚೀನ ಸಲಹಾಸಮಿತಿಗಳಿಂದಲೇ ಇಂದಿನ ಬ್ರಿಟಿಷ್ ಪಾರ್ಲಿಮೆಂಟ್ ಉದಯಿಸಿತೆಂದು ಹೇಳಬಹುದು.

	ಪ್ರಾಚೀನ ಕಾಲದಿಂದಲೂ ಬ್ರಿಟನ್ನಿನಲ್ಲಿ ಕಾನೂನು ಮಾಡುವ ಮೂರು ರೀತಿಯ ಅಧಿಕಾರಿಗಳಿದ್ದರೆನ್ನಬಹುದು. ಮೊದಲನೆಯದಾಗಿ ರಾಜ, ತರುವಾಯ ಗಣ್ಯರು, ಆಮೇಲೆ ಸಾಮಾನ್ಯರು. ಸಾಮಾನ್ಯ ಜನತೆ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಿ ಕಳಿಸಲು ಹಲವಾರು ವರ್ಷಗಳು ಬೇಕಾದವು. ಮೊದ ಮೊದಲು ರಾಜ ತನ್ನ ಸರದಾರರೊಡನೆ ಸಮಾಲೋಚಿಸಿ ಹೇಳಿದ ಮಾತೇ ಕಾನೂನಾಗುತ್ತಿತ್ತು. ಅವನು ನಿರಂಕುಶ ಪ್ರಭುವಾಗಿದ್ದ. ಆದರೆ ಕಾಲಕ್ರಮೇಣ ಜನತೆಯ ಪ್ರತಿನಿಧಿಗಳು ಶಾಸನಸಭೆಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಆಧುನಿಕ ಸಂಸತ್ ಸಭೆಗೆ ಹೋಲುವ ಸಭೆಯ ಅಧಿವೇಶನ 1265ರಲ್ಲಿ ಕೂಡಿತು.

	ಇತಿಹಾಸದಲ್ಲೇ ಪ್ರಥಮವಾಗಿ 3ನೆಯ ಎಡ್ವರ್ಡನ ಕಾಲದಲ್ಲಿ ಬ್ರಿಟನ್ನಿನ ಸಭೆ ಇಬ್ಭಾಗವಾಯಿತು. ಒಂದನ್ನು ಸಾಮಾನ್ಯರ ಸಭೆ ಎಂದೂ ಇನ್ನೊಂದನ್ನು ಗಣ್ಯರ ಸಭೆ ಎಂದೂ ಕರೆಯಲಾಯಿತು. ಪ್ರಾಚೀನ ಕಾಲದಲ್ಲಿ ರಾಜ ತನ್ನ ಸಭೆಗೆ ಸಾಮಾನ್ಯವಾಗಿ ಸರದಾರರನ್ನೂ ಇತರ ಧನಿಕರನ್ನೂ ಆಮಂತ್ರಿಸುವ ವಾಡಿಕೆ ಇತ್ತು. ಈ ಪದ್ಧತಿಯೇ ಇಂದಿನ ಗಣ್ಯರ ಸಭೆಗೆ ಆದಿಯಾಯಿತು. ಬ್ರಿಟನ್ನಿನ ಸಂಸತ್ತಿನ ಇನ್ನೊಂದು ಅಂಗವಾದ ಸಾಮಾನ್ಯರ ಸಭೆಯೂ ಇದೇ ರೀತಿ ಬೆಳವಣಿಗೆ ಹೊಂದಿತು. ರಾಜ ಹಣಕಾಸು ಹಾಗೂ ಇನ್ನಿತರ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಾಮಾನ್ಯ ಜನತೆಯ ಮುಖಂಡರೊಂದಿಗೆ ಸಮಾಲೋಚಿಸುವ ಪದ್ಧತಿ ಇತ್ತು. ಮುಂದೆ ಇದೇ ಸಾಮಾನ್ಯ ಸಭೆಯಾಗಿ ಪರಿವರ್ತನೆ ಹೊಂದಿತು. ಈ ಬದಲಾವಣಿ ಬಹಳ ಮಂದಗತಿಯಲ್ಲಿ ಸಾಗಿತೆಂದು ಹೇಳಬಹುದು, ಇದು ಒಂದು ಉತ್ಕ್ರಾಂತಿ ಎನ್ನಲಡ್ಡಿಯಿಲ್ಲ.

	ಪಾರ್ಲಿಮೆಂಟು ಪ್ರಾಚೀನ ಬ್ರಿಟನ್ನಿನಲ್ಲಿ ಕಾನೂನುಗಳನ್ನು ಮಾಡುವ ಶಾಸಕಾಂಗವಾಗಿರದೆ ಮುಖ್ಯವಾಗಿ ನ್ಯಾಯಾಂಗ ಹಾಗೂ ಕಾರ್ಯಾಂಗವಾಗಿತ್ತು. ಕಾನೂನು ರಚನೆಯಲ್ಲಿ ಅದರ ಪಾತ್ರ ಗೌಣವಾಗಿತ್ತು. ಆದ್ದರಿಂದಲೇ ಅದನ್ನು ಉಚ್ಚ ನ್ಯಾಯಾಲಯ (ಹೈಕೋರ್ಟ್ ಆಫ್ ಪಾರ್ಲಿಮೆಂಟ್) ಎಂದು ಕರೆಯಲಾಗುತ್ತಿತ್ತು. ಸಂವಿಧಾನ ಪರಂಪರೆಯ ಮೇರೆಗೆ ಇಂದು ಕೂಡ ಪಾರ್ಲಿಮೆಂಟನ್ನು ಮುಖ್ಯ ನ್ಯಾಯಾಲಯವೆಂದು ಹೇಳಲಾಗುತ್ತದೆ.

	14ನೆಯ ಶತಮಾನದ ಇನ್ನೊಂದು ಮಹತ್ತ್ವದ ಸಾಧನೆಯೆಂದರೆ ಪಾರ್ಲಿಮೆಂಟಿನ ಕೈಗೆ ಹಣಕಾಸಿನ ನಿಯಂತ್ರಣ ಬಂದದ್ದು. 1340ರಲ್ಲಿ ಈ ಹಕ್ಕನ್ನು ಪಾರ್ಲಿಮೆಂಟ್ 3ನೆಯ ಎಡ್ವರ್ಡನ ಮೇಲೆ ಪ್ರಯೋಗಿಸಿಯೇಬಿಟ್ಟಿತು. ಸ್ವಲ್ಪ ಕಾಲದ ಘರ್ಷಣಿಯ ಅನಂತರ ಈ ಅಧಿಕಾರ ದೃಢೀಕೃತವಾಯಿತು. ಇದೇ ಅಧಿಕಾರದಿಂದಲೇ ಉಳಿದ ಕೆಲವು ಹಕ್ಕುಗಳನ್ನು ಅದು ಸ್ಥಾಪಿಸಿಕೊಂಡಿತು. ಉದಾಹರಣಿಗೆ ಜನತೆಯ ಮೇಲೆ ಕರ ಹೇರುವ ಹಕ್ಕು ಪಾರ್ಲಿಮೆಂಟಿಗೆ ಇದ್ದುದರಿಂದ ಲೆಕ್ಕಪತ್ರಗಳ ಮೇಲೂ ಅದರ ಮೇಲ್ವಿಚಾರಣಿ ಇರಬೇಕಾಯಿತು. ಹೀಗಾಗಿ ಪಾರ್ಲಿಮೆಂಟು ಆಡಳಿತದಲ್ಲೂ ತನ್ನ ಒಂದು ಭಾಗ ಅಥವಾ ಪಾಲನ್ನು ಸ್ಥಾಪಿಸಿಕೊಂಡಿತು.

	ಮುಂದೆ ಸುಮಾರು 1376ರಲ್ಲಿ ರಾಜನ ಅಧಿಕಾರಿಗಳನ್ನು ಶಿಕ್ಷಿಸುವ ಹಕ್ಕನ್ನು ಪಾರ್ಲಿಮೆಂಟು ಪಡೆಯಿತು. ಹೀಗಾಗಿ 14ನೆಯ ಶತಮಾನದ ಕೊನೆಕೊನೆಗೆ ಪಾರ್ಲಿಮೆಂಟು ಆಡಳಿತದಲ್ಲಿ ತನ್ನ ಹಕ್ಕನ್ನು ಬಲಪಡಿಸಿಕೊಂಡಿತು. ಈ ಅವಧಿಯಲ್ಲಿ ಪಾರ್ಲಿಮೆಂಟಿನ ಅಸ್ತಿತ್ವ ಹಾಗೂ ಆಡಳಿತದಲ್ಲಿ ಅದರ ಸ್ಥಾನಮಾನಗಳು ನಿರ್ಧರಿಸಲ್ಪಟ್ಟುವು. 15ನೆಯ ಶತಮಾನದಲ್ಲಿ ಪಾರ್ಲಿಮೆಂಟಿನ ಅಭಿವೃದ್ಧಿ ಮಂದಗತಿಯಲ್ಲಿ ಸಾಗಿತು. ಟ್ಯೂಡರ್ ರಾಜರು ಪಾರ್ಲಿಮೆಂಟನ್ನು ತಮ್ಮ ಕೈ ಗೊಂಬೆಯಾಗಿ ಮಾಡಿಕೊಂಡರು. ಆದರೂ ಪಾರ್ಲಿಮೆಂಟಿನ ಸುಸಂಘಟನೆಯನ್ನೂ ಅವರೇ ಮಾಡಿದರು. ಪಾರ್ಲಿಮೆಂಟಿನ ಪ್ರತಿಯೊಂದು ಸಭೆಗೂ ಒಬ್ಬ ನಿಯಂತ್ರಕನನ್ನು ಅಧ್ಯಕ್ಷನಾಗಿ ನೇಮಿಸಲಾಯಿತು. ಒಂದೊಂದು ಸಭೆಯಲ್ಲಿ ಇಂತಿಷ್ಟೇ ಜನ ಸದಸ್ಯರಿರಬೇಕೆಂದು ನಿರ್ಧರಿಸಲಾಯಿತು. ಟ್ಯೂಡರ್ ದೊರೆಗಳ ಕಾಲದಲ್ಲಿ ಪಾರ್ಲಿಮೆಂಟಿನ ಅಧಿಕಾರಾಭಿವೃದ್ಧಿ ನಿಜವಾಗಿ ಆಗದಿದ್ದರೂ ನಾಮಮಾತ್ರಕ್ಕೆ ಸಾಕಷ್ಟು ಸುಧಾರಣೆಗಳಾದುವು. ಮುಂದೆ ಈ ಅಧಿಕಾರಿಗಳನ್ನು ಸ್ಪಷ್ಟವಾಗಿ ಪಡೆಯಲು ಪಾರ್ಲಿಮೆಂಟು ಹಕ್ಕು ಸ್ಥಾಪಿಸಿದಾಗ ಬ್ರಿಟನ್ನಿನಲ್ಲಿ ರಾಜ್ಯ ಕ್ರಾಂತಿ ಅನಿವಾರ್ಯವಾಯಿತು. 1688ರ ರಕ್ತ ರಹಿತ ಕ್ರಾಂತಿಯ ತರುವಾಯ ಪಾರ್ಲಿಮೆಂಟು ದೇಶದ ಉನ್ನತ ಪ್ರಭುತ್ವಾಂಗವೆಂಬುದನ್ನು ಸ್ವೀಕರಿಸಲಾಯಿತು.

	ಹೀಗೆ ಹಲವಾರು ಶತಮಾನಗಳ ಘರ್ಷಣೆಯ ಫಲವಾಗಿ ಇಂದಿನ ಬ್ರಿಟನ್ನಿನ ಪಾರ್ಲಿಮೆಂಟ್, ಮುಖ್ಯವಾಗಿ ಸಾಮಾನ್ಯರ ಸಭೆ, ತನ್ನ ಅಧಿಕಾರಿಗಳನ್ನು ಗಳಿಸಿಕೊಂಡಿದೆ. 1689ರಲ್ಲಿ ಸ್ವೀಕೃತವಾದ ಬಿಲ್ ಆಫ್ ರೈಟ್ಸ್‍ಗೆ(ಹಕ್ಕುಗಳ ವಿಧೇಯಕ) ಅನುಗುಣವಾಗಿ, ರಾಜತ್ವ ಮತ್ತು ಗಣ್ಯರ ಸಭೆಗಳಿಗಿಲ್ಲದ ಅನೇಕ ಅಧಿಕಾರಗಳನ್ನು ಸಾಮಾನ್ಯರ ಸಭೆ ಪಡೆದುಕೊಂಡಿತು. ಇದರಿಂದ ಪಾರ್ಲಿಮೆಂಟಿನಲ್ಲಿ ಸಾಮಾನ್ಯರ ಸಭೆಯ ಮಹತ್ತ್ವ ಹೆಚ್ಚಿತು. ಅದರಲ್ಲೂ 1911ರಿಂದ ಈಚೆಗೆ ಗಣ್ಯರ ಸಭೆಯ ಮಹತ್ತ್ವ ಇನ್ನಷ್ಟು ಕಡಿಮೆಯಾಯಿತು. ಆದ್ದರಿಂದ ಆಧುನಿಕ ಪಾರ್ಲಿಮೆಂಟಿನಲ್ಲಿ ಸಾಮಾನ್ಯರ ಸಭೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.

	18ನೆಯ ಶತಮಾನದ ತನಕ ಬ್ರಿಟನ್ನಿನ ಪ್ರಜಾಪ್ರಭುತ್ವ ಧನಿಕರಾದ ಮೇಲ್ದರ್ಜೆಯ ಜನತೆಗಾಗಿ ಇತ್ತು. ಪ್ರಜಾಪ್ರಭುತ್ವದ ಸೂತ್ರಗಳು 19ನೆಯ ಶತಮಾನದಲ್ಲಿ ಬೇರೂರಲು ಪ್ರಾರಂಭಿಸಿದುವು. 1832ರಲ್ಲಿ ಮಾಡಿದ ಸುಧಾರಣಾ ಕಾನೂನು ಈ ದಿಸೆಯಲ್ಲಿ ಪ್ರಥಮ ಹೆಜ್ಜೆ ಎಂದು ಹೇಳಬಹುದು. ಅನಂತರ 1867, 1884 ಹಾಗೂ 1918ರಲ್ಲಿ ಸ್ವೀಕರಿಸಿದ ಕಾನೂನುಗಳ ಪ್ರಕಾರ ಪ್ರಜಾ ಪ್ರಭುತ್ವದಲ್ಲಿ ಸಾಮಾನ್ಯಪ್ರಜೆಗೆ ಸಾಕಷ್ಟು ಮನ್ನಣೆ ಸಿಗುವಂತೆ ಆಯಿತು. 1945ರಿಂದ ಬ್ರಿಟನ್ನಿನಲ್ಲಿ ಸಮಾಜವಾದಿ ಆದರ್ಶ ಪ್ರಧಾನವಾದರೂ ಪಾರ್ಲಿಮೆಂಟಿನಲ್ಲಿ ಹೇಳೀಕೊಳ್ಳಬಹುದಾದಂಥ ಬದಲಾವಣೆ ಏನೂ ಆಗಿಲ್ಲ.

	ರಚನೆ ಹಾಗೂ ಕಾರ್ಯಪದ್ಧತಿ : ಬ್ರಿಟನ್ನಿನ ಶಾಸನಾಂಗ ಎರಡು ಸಭೆಗಳುಳ್ಳದ್ದಾಗಿದೆ. ಒಂದು ಸಾಮಾನ್ಯರ ಸಭೆ, ಇನ್ನೊಂದು ಗಣ್ಯರ ಸಭೆ.

	ಸಾಮಾನ್ಯರ ಸಭೆ : ಇದು ಚುನಾಯಿತ ಸಭೆ, ಧರ್ಮಗುರುಗಳು, ರಾಜನ ಆಡಳಿತಾಧಿಕಾರಿಗಳು ಮತ್ತು ಗಣ್ಯರ ಸಭೆಯ ಸದಸ್ಯರಾಗಿರುವವರು ಈ ಸಭೆಯ ಸದಸ್ಯರಾಗಲಾರರು. ಈ ಸಭೆಯ ಸದಸ್ಯನಾಗಬಯಸುವಾತ ಯಾವುದೇ ಚುನಾವಣಾ ಕ್ಷೇತ್ರದಿಂದ ಚುನಾಯಿತನಾಗಬಹುದು. ಒಂದು ಚುನಾವಣಾ ಕ್ಷೇತ್ರ ಸುಮಾರು 60,000 ಮತದಾರನ್ನೊಳಗೊಂಡಿರುತ್ತದೆ. ಈ ಸಭೆಗೆ ಸಾಮಾನ್ಯವಾಗಿ ಐದು ವರ್ಷಗಳಿಗೆ ಒಮ್ಮೆ ಚುನಾವಣೆಯಾಗುತ್ತದೆ. ಸಾಮಾನ್ಯರ ಸಭೆಗೆ ಒಟ್ಟು 630 ಜನ ಸದಸ್ಯರಿರಬೇಕೆಂದು 1955ರಲ್ಲಿ ನಿರ್ದಿಷ್ಟ ಪಡಿಸಲಾಗಿದೆ. ಇದರಲ್ಲಿ 511 ಸದಸ್ಯರು ಇಂಗ್ಲೆಂಡನ್ನೂ 36 ಸದಸ್ಯರು ವೇಲ್ಸನ್ನೂ 71 ಸದಸ್ಯರು ಸ್ಕಾಂಟ್ಲೆಂಡನ್ನೂ 12 ಸದಸ್ಯರು ಉತ್ತರ ಐರ್ಲೆಂಡನ್ನೂ ಪ್ರತಿನಿಧಿಸಬೇಕೆಂದು ನಿರ್ಧರಿಸಲಾಗಿದೆ.

	ಈ ಸಭೆ ಬ್ರಿಟನ್ನಿನ ಸಾಮಾನ್ಯ ಜನತೆಯನ್ನು ಪ್ರತಿನಿಧಿಸುತ್ತದೆ. ಹಣಕಾಸಿನ ಎಲ್ಲ ಅಧಿಕಾರಗಳೂ ಇದರ ಕೈಯಲ್ಲಿಯೇ ಇರುತ್ತವೆ 1202ಕ್ಕೆ ಮೊದಲು ಮಂತ್ರಿಗಳೂ ಸಾಮಾನ್ಯರ ಸಭೆಯನ್ನು ಅವಲಂಬಿಸಬೇಕಾಯಿತು. ಮಂತ್ರಿ ಮಂಡಲ ಸಾಮಾನ್ಯರ ಸಭೆಯ ವಿಶ್ವಾಸಕ್ಕೆ ಪಾತ್ರವಾಗಿರುವ ತನಕ ಮಾತ್ರ ರಾಜ್ಯಭಾರ ನಡೆಸುತ್ತದೆ. ಈ ಸಭೆಯ ವಿಶ್ವಾಸಕ್ಕೆ ಪಾತ್ರವಾಗಿರುವ ತನಕ ಮಾತ್ರ ರಾಜ್ಯಭಾರ ನಡೆಸುತ್ತದೆ. ಈ ಸಭೆಯ ಅವಿಶ್ವಾಸ ನಿರ್ಣಯ ಮಂತ್ರಿ ಮಂಡಲವನ್ನು ಹೊರಹಾಕಬಹುದು. ಆದ್ದರಿಂದಲೇ ಸಂಪುಟ ಸಾಮೂಹಿಕವಾಗಿ ಈ ಸಭೆಗೆ ಹೊಣೆಗಾರಿಕೆಯುಳ್ಳದ್ದಾಗಿರುತ್ತದೆ. ಸಾಮಾನ್ಯ ಸಭೆಯ ಈ ಒಂದು ಅಧಿಕಾರ ಅತ್ಯಂತ ಮಹತ್ತ್ವದೆಂದು ಹೇಳಬಹುದು. ಆದ್ದರಿಂದಲೇ ಗಣ್ಯರ ಸಭೆಗಿಂತ ಈ ಸಭೆಯ ಪ್ರಾಮುಖ್ಯ ಹೆಚ್ಚಾಗಿದೆ. ಅಲ್ಲದೆ ಈ ಸಭೆಗೂ ಗಣ್ಯರ ಸಭೆಗಿರುವಂತೆ ವಿಶಿಷ್ಟ ಹಕ್ಕುಗಳು ಇರುತ್ತವೆ.

	ಗಣ್ಯರ ಸಭೆ : ಇದು ಬ್ರಿಟಿಷ್ ಶಾಸನ ಸಭೆಯ ಹಿರಿಯರ ಸದನ, ಚುನಾಯಿತ ಸಭೆ ಅಲ್ಲ, ಶಾಶ್ವತವಾದ ಸಭೆ. ಇದರಲ್ಲಿ ಅನುವಂಶಿಕ ಸರದಾರರೇ ಬಹಳ. ಸದಸ್ಯರಲ್ಲಿ ಹಲವಾರು ಅಂತಸ್ತುಗಳಿವೆ. ಧಾರ್ಮಿಕ ಸದಸ್ಯರು, ಕಾನೂನಿನ ಸರದಾರರು. ಪ್ರಾತಿನಿಧಿಕ ಗಣ್ಯರು ಎಂದು ಹೀಗೆ ಅನೇಕ ತರದ ಗಣ್ಯರಿರುತ್ತಾರೆ. ಇದು ಗೌರವಾನ್ವಿತರ ಸಭೆ. 1955 ಅಕ್ಟೋಬರ್ 31 ರಂದು ಸಭೆಯಲ್ಲಿ 803 ಅನುವಂಶಿಕ ಸರದಾರರು, 16 ಸ್ಕಾಂಟ್ಲೆಂಡಿನ ಗಣ್ಯಪ್ರತಿನಿಧಿಗಳು, 4 ಐರ್ಲೆಂಡಿನ ಪ್ರತಿನಿಧಿಗಳು, 9 ಕಾನೂನಿನ ಗಣ್ಯರು ಹಾಗೂ 26 ಧಾರ್ಮಿಕ ಸದಸ್ಯರಿದ್ದರು. ಒಟ್ಟು ಈ ಸಭೆಯಲ್ಲಿ ಸುಮಾರು 850 ಜನ ಸದಸ್ಯರಿರುತ್ತಾರೆ.

	ಈ ಸಭೆ ಬ್ರಿಟನ್ನಿನ ಪ್ರಜಾಪ್ರಭುತ್ವದಲ್ಲಿಯ ಕುಲೀನರ ಅಂಶವೆಂದು ಹೇಳಬಹುದು. ಇದರ ಸದಸ್ಯರು ಧರ್ಮಗುರುಗಳು, ರಾಜಮನೆತನಗಳಿಗೆ ಸಂಬಂಧಪಟ್ಟವರು ಮತ್ತು ರಾಜರಿಂದ ಗೌರವಾನ್ವಿತ ಗಣ್ಯರಾಗಿರುತ್ತಾರೆ. ಇದು ಬ್ರಿಟಿಷ್ ಪಾರ್ಲಿಮೆಂಟಿನ ಹಿರಿಯರ ಸಭೆಯಾದರೂ ಅಮೆರಿಕದ ಸೆನೆಟ್ಟಿಗೆ ಇರುವಂತೆ ಹೆಚ್ಚಿನ ಅಧಿಕಾರಗಳಿಲ್ಲ. ಸಾಮಾನ್ಯರ ಸಭೆ ಕ್ರಮೇಣ ತನ್ನ ಹಕ್ಕುಗಳನ್ನು ಸ್ಥಾಪಿಸಿಕೊಂಡಂತೆ ಗಣ್ಯರ ಸಭೆ ಕಳೆದುಕೊಳ್ಳುತ್ತ ಬಂತು. ಕೊನೆಗೆ 1911ರಲ್ಲಿ ಸ್ವೀಕೃತವಾದ ಪಾರ್ಲಿಮೆಂಟ್ ಅಧಿನಿಯಮದಿಂದ ಗಣ್ಯರ ಸಭೆಯ ಅಧಿಕಾರಗಳೂ ತೀರ ಕಡಿಮೆಯಾದುವು. ಈ ಅಧಿನಿಯಮದ ಪ್ರಕಾರ ಸಾಮಾನ್ಯರ ಸಭೆಯಲ್ಲಿ ಒಂದು ವಿಧೇಯಕ ಅವ್ಯಾಹತವಾಗಿ ಮೂರು ಸಲ ಸ್ವೀಕೃತವಾದರೆ ಈ ಸಭೆಯ (ಗಣ್ಯರ ಸಭೆಯ) ಒಪ್ಪಿಗೆ ಇಲ್ಲದಿದ್ದರೂ ಅಧಿನಿಯಮವಾಗುತ್ತದೆ.

	ಗಣ್ಯರ ಸಭೆಗೆ ಪ್ರಾಮುಖ್ಯ ಇಲ್ಲದಿರುವುದಕ್ಕೆ ಇನ್ನೊಂದು ಕಾರಣವೆಂದರೆ ಸರ್ಕಾರ ಅಥವಾ ಸಚಿವ ಸಂಪುಟದ ಜವಾಬ್ದಾರಿ ಇರುವುದು ಸಾಮಾನ್ಯರ ಸಭೆಗೇ ವಿನಾ ಈ ಸಭೆಗೆ ಅಲ್ಲ. ಈ ಸ್ಥಿತಿಯ ವಿರುದ್ಧ ಮೊದಮೊದಲು ಪ್ರತಿಭಟನೆ ಕಂಡುಬಂದರೂ 1911ರಿಂದ ಈಚೆಗೆ ಸಾಮಾನ್ಯರ ಸಭೆಯ ಪ್ರಾಧಾನ್ಯವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ರಾಜ ಅಥವಾ ರಾಣಿ ತಮಗೆ ಬೇಕಾದಾಗ ಹೊಸ ಸರದಾರರನ್ನು ನೇಮಿಸುವ ಸಂಪ್ರದಾಯ ಇದಕ್ಕೆ ಮೂಲ ಕಾರಣವೆಂದು ಹೇಳಬಹುದು. ರಾಜ ಸಾಮಾನ್ಯವಾಗಿ ಮಂತ್ರಿಮಂಡಲದ ಸಾಮಾನ್ಯರ ಸಭೆಯ ಬಹುಮತ ಗಳಿಸಿದ ಪಕ್ಷದ ಮುಖಂಡರಿಂದ ಕೂಡಿದ್ದಾದ್ದರಿಂದ ತಮಗೆ ಬೇಕಾದ ಸರದಾರರನ್ನು ನೇಮಿಸಲು ಅದು ರಾಜನಿಗೆ ಸಲಹೆಯನ್ನೀಯುತ್ತದೆ. ಆದ್ದರಿಂದ ಈ ಸಭೆಯ ಮಹತ್ತ್ವ ಕಡಿಮೆಯಾಯಿತು. 1958ರಿಂದ ಸ್ರೀಯರನ್ನೂ ಈ ಸಭೆಗೆ ನೇಮಿಸುವ ಹೊಸ ಸಂಪ್ರದಾಯ ಪ್ರಾರಂಭವಾಯಿತು.

	ಪಾರ್ಲಿಮೆಂಟಿನ ಕಾರ್ಯಪದ್ಧತಿ ಮತ್ತು ಸಂಪ್ರದಾಯಗಳು : ಪಾರ್ಲಿಮೆಂಟು ತನ್ನದೇ ಆದ ನಿಯಮಗಳಿಗನುಸಾರವಾಗಿ ನಿತ್ಯದ ಕಾರ್ಯಕ್ರಮ ಸಾಗಿಸುತ್ತದೆ. ಪ್ರತಿಯೊಂದು ಸಭೆಯಲ್ಲಿ ಒಬ್ಬ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಇರುತ್ತಾರೆ. ಅವರು ಸಭೆಯ ನಿಯಂತ್ರಕರೆಂದು ಹೇಳಬಹುದು. ಬಹುಮತದಿಂದ ಒಪ್ಪಿಕೊಂಡ ನಿಯಮಗಳ ಮೇರೆಗೆ ಶಾಸನ ಸಭೆ ತನ್ನ ವ್ಯವಹಾರಗಳನ್ನು ನಡೆಸುತ್ತದೆ. ಸಭೆಗೆ ಅಗೌರವ ತರುವ ಯಾವನೇ ಸದಸ್ಯನಿಗೆ ಸರಿಯಾದ ಶಿಕ್ಷೆ ವಿಧಿಸುವ ಅಧಿಕಾರ ಅಧ್ಯಕ್ಷರಿಗಿದೆ. ಸದಸ್ಯರಿಗೂ ಕೆಲವು ವಿಶಿಷ್ಟ ಹಕ್ಕುಗಳಿವೆ. ಉದಾಹರಣಿಗೆ ಭಾಷಣ ಸ್ವಾತಂತ್ರ್ಯ, ಬಂಧನಕ್ಕೊಳಗಾಗಬಾರದೆಂಬ ಹಕ್ಕು ಇತ್ಯಾದಿ. ಪಾರ್ಲಿಮೆಂಟಿನ ಘನತೆ ಗೌರವಗಳಿಗೆ ಯಾರೂ ಭಂಗ ತರುವಂತಿಲ್ಲ. ಅಂಥವರನ್ನು ಶಿಕ್ಷಿಸುವ ಅಧಿಕಾರ ಪಾರ್ಲಿಮೆಂಟಿಗೆ ಇದೆ ಇದರ ರೂಢಿಗತ ವ್ಯವಹಾರದಲ್ಲಿ ಸರ್ಕಾರದ ಯಾವುದೇ ಅಂಗವಾಗಲಿ ವ್ಯಕ್ತಿಯಾಗಲಿ ಹಸ್ತಕ್ಷೇಪ ಮಾಡಲಾಗದು. ಪಾರ್ಲಿಮೆಂಟು ವಿಧಿಸಿದ ಶಿಕ್ಷೆಯ ವಿರುದ್ಧ ಯಾರಾದರೂ ನ್ಯಾಯಾಲಕ್ಕೆ ಹೋದರೆ ಅಂಥವರ ಮನವಿಯನ್ನು ನ್ಯಾಯಾಲಯ ಸ್ವೀಕರಿಸಲಾಗದು. ಇದು ಸುಮಾರು 18ನೆಯ ಶತಮಾನದಿಂದ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ.

	ಆಧುನಿಕ ಕಾನೂನುಗಳ ರಚನೆಗೆ ಸಾಕಷ್ಟು ತಾಂತ್ರಿಕಜ್ಞಾನದ ಅವಶ್ಯಕತೆ ಇದೆ. ಪಾರ್ಲಿಮೆಂಟಿನ ಸರ್ವ ಸದಸ್ಯರೂ ಪ್ರವೀಣರಿರುವುದು ವಿರಳ. ಆದ್ದರಿಂದ ಪಾರ್ಲಿಮೆಂಟು ಕಲಾಪಗಳನ್ನು ಸಮಿತಿಗಳ ಮೂಲಕ ಸಾಗಿಸುತ್ತದೆ. ಪಾರ್ಲಿಮೆಂಟು ಅನೇಕ ಸದಸ್ಯರಿಂದೊಡಗೂಡಿದ ಭವ್ಯ ಸಭೆಯಾಗಿರುವುದರಿಂದ ಸುದೀರ್ಘ ಚರ್ಚೆಯಾಗಲಿ ವಿಶೇಷ ಪ್ರವೀಣತೆಯಾಗಲಿ ಸುಲಭಸಾಧ್ಯವಾಗದು. ಆದ್ದರಿಂದ ಎಲ್ಲ ಕಾರ್ಯಕ್ರಮಗಳನ್ನು ಹಲವಾರು ಶಾಶ್ವತ ಹಾಗೂ ತಾತ್ಕಲಿಕ ಸಮಿತಿಗಳ ಮುಖಾಂತರ ಅದು ಪರಿಶೀಲಿಸುತ್ತದೆ. ನಿರ್ಣಯ ತೆಗೆದುಕೊಳ್ಳುವಾಗ ಇಡೀ ಸಭೆ ಒಂದು ಸಮಿತಿಯಾಗಿ ಪರಿವರ್ತನೆಗೊಂಡು ಸಾಕಷ್ಟು ಚರ್ಚಿಸಿ, ವಿವೇಚಿಸಿ ವಿಧೇಯಕವನ್ನು ಸ್ವೀಕರಿಸುತ್ತದೆ. ಇದರಿಂದ ಸಭೆಗೆ ವೇಳೆಯ ಉಳಿತಾಯವಾಗುವುದಲ್ಲದೆ ಪ್ರವೀಣರಿಂದ ವಿಶೇಷ ಪರಿಶೀಲನೆಯ ಕಾರ್ಯವೂ ಸಾಧ್ಯವಾಗುತ್ತದೆ.

	ಪಾರ್ಲಿಮೆಂಟಿನ ಪ್ರಾಶಸ್ತ್ಯ : ಪ್ರಾಚೀನ ಕಾಲದಿಂದಲೂ ಜನತೆಯ ಹಿತವನ್ನು ಲಕ್ಷಿಸಿ ಅವರ ಏಳ್ಗೆಗೆ ಶ್ರಮಿಸಿದ ಇತಿಹಾಸ ಬ್ರಿಟನ್ನಿನ ಪಾರ್ಲಿಮೆಂಟಿಗೆ ಇದೆ. ಜನರ ಪ್ರತಿನಿಧಿಯಾಗಿ ನಿರಂಕುಶ ಸಾರ್ವಭೌಮರೊಡನೆ ಹೋರಾಡಿ ಅದು ತನ್ನ ಜನತೆಯ ಮೂಲಭೂತ ಹಕ್ಕುಗಳನ್ನು ಸ್ಥಾಪಿಸಿದ ಹಿರಿಮೆ ಪಾರ್ಲಿಮೆಂಟಿಗೆ, ಮುಖ್ಯವಾಗಿ ಸಾಮಾನ್ಯರ ಸಭೆಗೆ ಇದೆ. ಆದ್ದರಿಂದಲೇ ಬ್ರಿಟಿಷರು ತಮ್ಮ ಪಾರ್ಲಿಮೆಂಟಿನಲ್ಲೇ ಅತ್ಯುಚ್ಚ ನ್ಯಾಯಾಲಯವನ್ನು ಕಂಡುಕೊಂಡರು. ಸರ್ವಾಧಿಕಾರಿ ರಾಜನಿಗಿಂತ ಚುನಾಯಿತ ಸರ್ವಾಧಿಕಾರಿ ಸಭೆ ಒಳ್ಳೆಯದೆಂದೇ ಭಾವಿಸಿ ಬ್ರಿಟಿಷರು ಅದರಲ್ಲಿ ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆ ಸಾಧಿಸಿಕೊಂಡರು. ಆದ್ದರಿಂದಲೇ ಪಾರ್ಲಿಮೆಂಟನ್ನು ಮೂಲಭೂತ ಹಕ್ಕುಗಳ ರಕ್ಷಾಕವಚವೆಂದು ಭಾವಿಸಲಾಗಿದೆ. 

	ಪಾರ್ಲಿಮೆಂಟಿನ ಬೆಳವಣಿಗೆ ರಾಜನೀತಿಶಾಸ್ತ್ರಕ್ಕೇ ಒಂದು ಹೊಸ ಕೊಡುಗೆ ನೀಡಿತು. ಅದು ಸಂಸದೀಯ ಮಂತ್ರಿಮಂಡಲ ಸರ್ಕಾರ ಪದ್ಧತಿ. ಈ ಪದ್ಧತಿಯ ಮೇರೆಗೆ ಸಾಮಾನ್ಯರ ಸಭೆಯಲ್ಲಿ ಬಹುಮತ ಗಳಿಸಿದ ಅಥವಾ ಬಹುಮತ ಬೆಂಬಲವುಳ್ಳ ಪಕ್ಷದ ನಾಯಕನ್ನು ಪ್ರಧಾನಮಂತ್ರಿಯಾಗಿ ರಾಜ ನೇಮಿಸುತ್ತಾನೆ. ತರುವಾಯ ಪ್ರಧಾನಮಂತ್ರಿ ರಾಜನ ಒಪ್ಪಿಗೆಯಿಂದ ತನ್ನ ಸಹೋದ್ಯೋಗಿಗಳನ್ನು ಆಯ್ದುಕೊಳ್ಳುತ್ತಾನೆ. ಪ್ರಧಾನಮಂತ್ರಿ ತನ್ನ ಇಡೀ ಮಂತ್ರಿಮಂಡಲದೊಡನೆ ಸಾಮೂಹಿಕವಾಗಿ ಸಭೆಗೆ ಜವಾಬ್ದಾರನಾಗಿರುತ್ತಾನೆ. ಸಭೆಯ ವಿಶ್ವಾಸ ಕಳೆದುಕೊಂಡರೆ ಮಂತ್ರಿಮಂಡಲ ತ್ಯಾಗಪತ್ರ ಒಪ್ಪಿಸಬೇಕಾಗುವುದು. ಈ ಪದ್ಧತಿ ಸುಮಾರು 1700ರಿಂದ ಈಚೆಗೆ ದೃಢೀಕೃತವಾಯಿತು. ರಾಷ್ಟ್ರದ ಸಂಪೂರ್ಣ ಆಡಳಿತಾಧಿಕಾರ ಜನತೆಯ ಪ್ರತಿನಿಧಿಯಾದ ವಿಧಾನಸಭೆಗೆ ಇರಬೇಕೇ ವಿನಾ ಒಬ್ಬ ಸರ್ವಾಧಿಕಾರಿಯ ಕೈಯಲ್ಲಿರಕೂಡದು ಎಂಬ ಬ್ರಿಟಿಷರ ಭಾವನೆಯಿಂದಲೇ ಶಾಸನಸಭೆಗೆ ಹೊಣಿಗಾರಿಕೆಯುಳ್ಳ ಮಂತ್ರಿಮಂಡಲದ ಸರ್ಕಾರ ಪದ್ಧತಿ ಬೆಳೆಯಿತು. ಆಧುನಿಕ ಜಗತ್ತಿನ ಅನೇಕ ರಾಷ್ಟ್ರಗಳು ಈ ಪದ್ಧತಿಯನ್ನೇ ಅನುಸರಿಸಿವೆ. ಒಟ್ಟಿನಲ್ಲಿ ಬ್ರಿಟನ್ನಿನ ಪಾರ್ಲಿಮೆಂಟು ಜನತೆಯ ಮೂಲಭೂತ ಹಕ್ಕುಗಳ ರಕ್ಷಾಕವಚವಾಗಿ, ರಾಜ್ಯಾಡಳಿತದ ಕೇಂದ್ರವಾಗಿ ಕಲಸ ಮಾಡುವ ರಾಷ್ಟ್ರೀಯ ವೇದಿಕೆಯೆನಿಸಿದೆ
(ಜಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ